ಹ್ಯಾರಿಸನ್, ಬೆಂಜಮಿನ್
	1833-1901. ಅಮೆರಿಕದ 23ನೆಯ ಅಧ್ಯಕ್ಷ(1888-93). 1833 ಆಗಸ್ಟ್ 20ರಂದು ಓಹಿಯೊ ಪ್ರಾಂತದಲ್ಲಿ ಜನಿಸಿದ. ಓಹಿಯೊದ ಮಿಯಾಮಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ (1852), ಸಿನ್ಸಿನಾಟಿಯಲ್ಲಿ ಕಾನೂನು ಪದವೀಧರನಾದ(1854). ಅನಂತರ ವಕೀಲ ವೃತ್ತಿಯಲ್ಲಿ ಅತ್ಯುತ್ತಮ ವಕೀಲನೆಂದು ಖ್ಯಾತಿ ಗಳಿಸಿದ. ಅಮೆರಿಕದ ಅಂತರ್ಯುದ್ಧದ ತರುವಾಯ ಸವಾರ ಪದಾತಿ ದಳದ ಮುಖ್ಯಸ್ಥನಾಗಿ ನಿಯಮಿತನಾದ(1862). ಅಮೆರಿಕ ಸಂಯುಕ್ತ ಸಂಸ್ಥಾನಗಳ ಸೆನೆಟ್ ಸದಸ್ಯನಾಗಿ ಚುನಾಯಿತನಾದ(1880). ಸೆನೆಟ್‍ನಲ್ಲಿ ರೆಡ್ ಇಂಡಿಯನ್ನರು ಮತ್ತು ಅಂತರ್ಯುದ್ಧದಲ್ಲಿ ಭಾಗವಹಿಸಿದ ಯೋಧರ ಪರವಾಗಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ವಾದಿಸಿದ.

	ರಿಪಬ್ಲಿಕನ್ ಪಕ್ಷದ ನೇತಾರನಾಗಿ ಅಮೆರಿಕದ ಅಧ್ಯಕ್ಷನಾದ(1888). ಅನಂತರ ಅನೇಕ ಸುಧಾರಣೆಗಳನ್ನು ಕೈಗೊಂಡ. ಆಂತರಿಕ ಅಭಿವೃದ್ಧಿಗಾಗಿ, ನೌಕಾದಳದ ಬೆಳೆವಣಿಗೆಗಾಗಿ ಅನೇಕ ಮಸೂದೆಗಳನ್ನು ಜಾರಿಗೆ ತಂದ. ಯುದ್ಧವಿರದ ಸಮಯದಲ್ಲಿ ಒಂದು ಬಿಲಿಯನ್ ಡಾಲರ್ ಹಣವನ್ನು ಸೇನೆಗಾಗಿ ಬಳಸಲು ಕಾಂಗ್ರೆಸ್ ನಿಶ್ಚಯಿಸಿತ್ತು. ಇದನ್ನು ವಿರೋಧಪಕ್ಷ ಬಿಲಿಯನ್ ಡಾಲರ್ ಕಾಂಗ್ರೆಸ್ ಎಂದು ಟೀಕಿಸಿತು. ಇದರೊಂದಿಗೆ ಶರ್ಮನ್ ಆಂಟಿ-ಟ್ರಸ್ಟ್ ಆಕ್ಟ್ ಜಾರಿಗೆ ತರಲಾಯಿತು. ಇದು ಟ್ರಸ್ಟ್‍ಗಳನ್ನು ನಿಯಂತ್ರಿಸಲು ಜಾರಿಗೆ ತಂದ ಅಮೆರಿಕದ ಮೊದಲ ಫೆಡರಲ್ ಕಾಯ್ದೆಯಾಯಿತು.

	ಇವನ ಅಧಿಕಾರಾವಧಿಯಲ್ಲಿ ಸುಂಕ ನಿಗದಿಯ ಪ್ರಶ್ನೆ ದೊಡ್ಡಸವಾ ಲಾಗಿ ಪರಿಣಮಿಸಿತ್ತು. ಸುಂಕಗಳನ್ನು ಹೆಚ್ಚಿಸಿ ಖಜಾನೆಯಲ್ಲಿ ಹಣ ತುಂಬುವ ಪ್ರಯತ್ನವನ್ನು ಸರ್ಕಾರ ಮಾಡಿತು. ಸುಂಕ ಕಡಮೆಮಾಡಲು ವಾದಿಸುತ್ತಿದ್ದವರು ಖಜಾನೆಯಲ್ಲಿ ಉಳಿತಾಯದ ಹಣ ಹೆಚ್ಚಿದರೆ ವಾಣಿಜ್ಯೋದ್ಯಮಕ್ಕೆ ಧಕ್ಕೆಯಾಗುವುದೆಂದು ತೀವ್ರವಾಗಿ ಪ್ರತಿಭಟಿಸಿದರು. ಪರಿಸ್ಥಿತಿಯನ್ನು ಸುಧಾರಿಸಲು ಈತ ಅನೇಕ ಕ್ರಮಗಳನ್ನು ಕೈಗೊಂಡ. ರಫ್ತಾಗುತ್ತಿದ್ದ ಕಚ್ಚಾ ಸಕ್ಕರೆಯ ಮೇಲಿನ ಸುಂಕವನ್ನು ತೆಗೆದು ಹಾಕಿದ. ಇದರಿಂದ ಸ್ಥಳೀಯ ಸಕ್ಕರೆ ಉತ್ಪಾದಕರಿಗೆ ಸಹಾಯವಾಯಿತು. ಆದರೆ ದುರದೃಷ್ಟವಶಾತ್ ಇವನ ಆಡಳಿತದ ಕೊನೆಗಾಲದಲ್ಲಿ ಖಜಾನೆ ಖಾಲಿಯಾಯಿತು. ದೇಶದಲ್ಲಿ ಆರ್ಥಿಕ ಸಂಕಷ್ಟ ಉಂಟಾಯಿತು. ರಿಪಬ್ಲಿಕನ್ ಪಕ್ಷ ಇವನನ್ನು ನಾಯಕತ್ವದಿಂದ ತೆಗೆಯಲು ನಿರ್ಧರಿಸಿತು. ಚುನಾವಣೆಯಲ್ಲಿ ಕ್ಲೆವ್‍ಲ್ಸಾಂಡ್ ಇವನನ್ನು ಸೋಲಿಸಿ ಅಮೆರಿಕದ 24ನೆಯ ಅಧ್ಯಕ್ಷನಾದ(1893).

	ವಿದೇಶಾಂಗ ನೀತಿಯಲ್ಲಿ ಈತ ಪ್ರಬಲ, ನಿರ್ಣಾಯಕ ನೀತಿಯನ್ನೇ ಅನುಸರಿಸಲು ನಿಶ್ಚಯಿಸಿದ. ವಾಷಿಂಗ್‍ಟನ್ನಿನಲ್ಲಿ ಮೊದಲ ಪ್ಯಾನ್ ಅಮೆರಿಕನ್ ಕಾಂಗ್ರೆಸ್ ಸಮ್ಮೇಳನವನ್ನು ಸಮಾವೇಶಗೊಳಿಸಲಾಯಿತು (1889). ಇದು ಮುಂದೆ ಪ್ಯಾನ್ ಅಮೆರಿಕನ್ ಒಕ್ಕೂಟದ ಸ್ಥಾಪನೆಗೆ ನಾಂದಿಯಾಯಿತು. ಇವನ ಕಾಲಾವಧಿಯಲ್ಲಿ ಹವಾಯ್ ದ್ವೀಪವನ್ನು ವಶಪಡಿಸಿಕೊಳ್ಳಲು ಪ್ರಯತ್ನ ನಡೆಯಿತಾದರೂ ಇದಕ್ಕೆ ಕಾಂಗ್ರೆಸ್ಸಿನ ಒಪ್ಪಿಗೆ ದೊರೆಯಲಿಲ್ಲ.

	ಅಧ್ಯಕ್ಷ ಪದವಿಯಿಂದ ಇಳಿದಮೇಲೆ ಈತ ಇಂಡಿಯಾ ನಾಪೊಲಿಸ್‍ಗೆ ಹಿಂದಿರುಗಿದ, 1901 ಮಾರ್ಚ್ 13ರಂದು ನಿಧನನಾದ.
									
	(ಐ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ